ಗ್ರೌಸ್

ಗ್ಯಾಲಿಫಾರ್ಮಿಸ್ ಗಣದ ಟೆಟ್ರವೋನೀಡೀ ಕುಟುಂಬಕ್ಕೆ ಸೇರಿದ ಒಂದು ಹಕ್ಕಿ. ಸುಮಾರು 10 ಜಾತಿಗಳ 18 ಪ್ರಭೇದಗಳಿಗೆ ಈ ಹೆಸರು ಅನ್ವಯವಾಗುತ್ತದೆ. ಎಲ್ಲ ಪ್ರಭೇದಗಳೂ ಪ್ರಪಂಚದ ಉತ್ತರಾರ್ಧಕ್ಕೆ ಸೀಮಿತವಾಗಿವೆ. ಕೋಳಿ, ಫೆಸೆಂಟ್, ನವಿಲು, ಟರ್ಕಿಕೋಳಿ ಮುಂತಾದ ಹಕ್ಕಿಗಳಿಗೆ ಹತ್ತಿರ ಸಂಬಂಧಿಗಳಾದ ಇವು ಹೆಚ್ಚು ಕಡಿಮೆ ಕೋಳಿಯಷ್ಟೇ ಗಾತ್ರದವಾಗಿವೆ. ಆದರೆ ಇವುಗಳ ಮೈಬಣ್ಣ ಮಾತ್ರ ಅತ್ಯಂತ ಸಾಧಾರಣ ಬಗೆಯದು. ನವಿಲು ಅಥವಾ ಫೆಸೆಂಟುಗಳ ಉಜ್ಜ್ವಲ ವರ್ಣವಿನ್ಯಾಸ ಗ್ರೌಸುಗಳಲ್ಲಿ ಇಲ್ಲ. ಆದರೂ ತಾವಿರುವ ನೆಲೆಗಳಲ್ಲಿ ಶತ್ರುಗಳ ಕಣ್ಣಿಗೆ ಬೀಳದಂತೆ ಮರೆಮಾಡಿಕೊಂಡು ವಾಸಿಸಲು ಅನುಕೂಲವಾಗುವಂತೆ ಇವುಗಳ ಮೈ ಬಣ್ಣ ಇದೆ. ಕೆಲವು ಬಗೆಯ ಗ್ರೌಸುಗಳು ಋತುಮಾನಕ್ಕನುಗುಣವಾಗಿ ತಮ್ಮ ಮೈಬಣ್ಣವನ್ನು ಬದಲಿಸುತ್ತವೆ. ಉದಾಹರಣೆಗೆ ಉತ್ತರ ಪರಿಧ್ರುವದಲ್ಲಿ ವಾಸಿಸುವ ವಿಲೊ ಗ್ರೌಸ್ (ವಿಲೊ ಟಾರ್ಮಿಗನ್) ಎಂಬ ಹಕ್ಕಿಗೆ ಬೇಸಗೆಯಲ್ಲಿ ಕಪ್ಪು ಮತ್ತು ಕಂದು ಬಣ್ಣವೂ ಚಳಿಗಾಲದಲ್ಲಿ ಅಚ್ಚ ಬಿಳಿ ಬಣ್ಣವೂ ಇರುತ್ತವೆ. ಇದರಿಂದ ಆಯಾಕಾಲದ ಪರಿಸರದ ಹಿನ್ನೆಲೆಗೆ ಹೊಂದಿಕೊಳ್ಳಲು ಅನುಕೂಲ. ದಷ್ಟಪುಷ್ಟವಾದ ದೇಹ, ಪುಕ್ಕಗಳಿಂದ ಸಂಪೂರ್ಣವಾಗಿ ಆವೃತವಾದ ಬಲವಾದ ಕಾಲುಗಳು (ಕೆಲವು ಸಲ ಪಾದಗಳು ಸಹ), ಮೋಟಾದ ಮತ್ತು ಕೆಳಮುಖವಾಗಿ ನಸುಬಾಗಿದ ಕೊಕ್ಕು, ಪುಕ್ಕಗಳಿಂದ ಆವೃತವಾದ ಮೂಗಿನ ಹೊಳ್ಳೆಗಳು, ಪಾದದ ಮುಂದಿನ ಬೆರಳುಗಳಿಗಿಂತ ಚಿಕ್ಕದಾದ ಹಾಗೂ ಕೊಂಚ ಮೇಲಕ್ಕೆತ್ತಿದಂತೆ ಇರುವ ಹಿಂಬೆರಳು ಮತ್ತು ನಿಮಿರಿ ನಿಲ್ಲುವಂಥ ಗರಿಗಳುಳ್ಳ ಇಲ್ಲವೆ ಗರಿಗಳೇ ಇಲ್ಲದೆ ಬೋಳು ಬೋಳಾದ ವರ್ಣರಂಜಿತ ಭಾಗವನ್ನುಳ್ಳ ಮೋಟು ಕತ್ತು - ಇವು ಗ್ರೌಸುಗಳ ಪ್ರಮುಖ ಲಕ್ಷಣಗಳು. ಕೆಲವು ಬಗೆಗಳಲ್ಲಿ ಕಾಲ್ಬೆರಳುಗಳ ಎರಡು ಪಕ್ಕಗಳಲ್ಲೂ ಚಳಿಗಾಲದಲ್ಲಿ ಬಾಚಣಿಗೆಯ ಹಲ್ಲುಗಳಂಥ ರಚನೆಗಳು ಹುಟ್ಟಿಕೊಳ್ಳುತ್ತವೆ. ಹಿಮದಲ್ಲಿ ನಡೆಯುವಾಗ ಕಾಲಿಗೆ ಹಿಡಿತವನ್ನು ಕೊಡಲು ಈ ರಚನೆಗಳು ಸಹಕಾರಿಗಳಾಗಿವೆ. ಬೇಸಗೆಯಲ್ಲಿ ಈ ಹಲ್ಲುಗಳು ಬಿದ್ದುಹೋಗುತ್ತವೆ. ಗ್ರೌಸುಗಳು ಭೂವಾಸಿಗಳು. ದಟ್ಟವಾದ ಕಾಡುಗಳು ಇಲ್ಲವೆ ಕುರುಚಲು ಅಥವಾ ಹುಲ್ಲು ಬೆಳೆದ ಕಾಡುಗಳು ಇವುಗಳ ನೆಲೆ. ಇವು ಬೀಜ, ಸಣ್ಣ ಪುಟ್ಟ ಕಾಯಿ, ಗಿಡಗಳ ಚಿಗುರು ಮುಂತಾದವನ್ನು ತಿಂದು ಜೀವಿಸುತ್ತವೆ. ಚೆನ್ನಾಗಿ ಹಾರಲಾರವು. ಅಪಾಯವೊದಗಿದಾಗ ಮಾತ್ರ ಶೀಘ್ರಗತಿಯಲ್ಲಿ ಕೊಂಚದೂರ ಹಾರಿ ಪೊದೆಗಳಲ್ಲಿ ಅಡಗಿಕೊಂಡು ಬಿಡುತ್ತವೆ.
(ಕೆ.ಎಂ.ವಿ.)

ಬಹುಪಾಲು ಗ್ರೌಸುಗಳು ಬಹುಪತ್ನೀಕಗಳು. ಅಲ್ಲದೆ ಇವು ತಮ್ಮ ಪ್ರಣಯಾಚರಣೆಗೆ ಹೆಸರುವಾಸಿಯಾಗಿವೆ. ವಿಚಿತ್ರ ಬಗೆಯ ನೃತ್ಯ ವಿಲಾಸಗಳನ್ನೊಳಗೊಂಡ ಈ ಕೇಳಿಯನ್ನು ರಫ್ಡ್ ಗ್ರೌಸ್, ಬ್ಲ್ಯಾಕ್‍ಗ್ರೌಸ್ (ನೋಡಿ- ಕರಿಹುಂಜ), ಕೇಪರ್‍ಕೇಲಿ ಮುಂತಾದವುಗಳಲ್ಲಿ ಕಾಣಬಹುದು. ರಫ್ಡ್ ಗ್ರೌಸ್ ಹಕ್ಕಿಯ ಕತ್ತಿನಲ್ಲಿ ದೊಡ್ಡ ಗರಿಗಳ ಗುಚ್ಛವೊಂದಿದೆ. ಪ್ರಣಯಾಚರಣೆಯಲ್ಲಿ ತೊಡಗಿರುವಾಗ ಯಾವುದಾದರೂ ಒಂದು ಮರದಿಮ್ಮಿಯ ಮೇಲೆ ಓಡಾಡುತ್ತ ತನ್ನ ಕತ್ತಿನ ಗುಚ್ಛವನ್ನು ನಿಮಿರಿಸಿಕೊಂಡು, ರೆಕ್ಕೆಗಳನ್ನು ಅತ್ಯಂತ ತ್ವರಿತಗತಿಯಲ್ಲಿ ಚಲಿಸುತ್ತ ಗಾಳಿಯನ್ನು ಬಡಿಯುತ್ತದೆ. ಈ ಬಡಿತದಿಂದ ಒಂದು ತಮಟೆ ಬಡಿದಂಥ ಶಬ್ದ ಉಂಟಾಗುತ್ತದೆ. ಕೇಪರ್‍ಕೇಲಿ ಎಂಬ ಗ್ರೌಸ್ ಹಕ್ಕಿ ತನ್ನದೇ ಆದ ಒಂದು ನೆಲೆಯನ್ನು ಸ್ಥಾಪಿಸಿಕೊಂಡು ಅಲ್ಲಿನ ಪೈನ್ ಮರವೊಂದನ್ನು ಆರಿಸಿಕೊಂಡು ಅದರ ರೆಂಬೆಯ ಮೇಲೆ ನಡೆದಾಡುತ್ತ ವಿಚಿತ್ರ ರೀತಿಯಲ್ಲಿ ಕೂಗುತ್ತ, ಕೆನೆಯುತ್ತ, ತನ್ನ ಬಾಲದ ಗರಿಗಳನ್ನು ಜಪಾನೀ ಬೀಸಣಿಗೆಯ ಆಕಾರದಲ್ಲಿ ಹರಡಿಕೊಂಡು ಪ್ರಣಯಕೇಳಿಯಲ್ಲಿ ತೊಡಗುತ್ತದೆ. ಬಹುಪತ್ನಿತ್ವಕ್ಕೆ ಹೆಸರಾದ ಈ ಹಕ್ಕಿ ಒಂದು ಋತುವಿನಲ್ಲಿ 3 - 12 ಕ್ಕೂ ಹೆಚ್ಚು ಹೆಣ್ಣುಗಳೊಂದಿಗೆ ಸಂಪರ್ಕವಿರಿಸಿಕೊಳ್ಳುತ್ತದೆ. ಇದೇ ರೀತಿ ಉತ್ತರ ಅಮೆರಿಕದ ಸೇಚ್‍ಗ್ರೌಸ್, ಪ್ರೈರಿ ಚಿಕನ್ ಮುಂತಾದವು ತಮ್ಮ ಕತ್ತಿನ ಆಚೀಚೆಯಿರುವ ಬೋಳಾದ ಭಾಗವನ್ನು ಗಾಳಿಯಿಂದ ಹಿಗ್ಗಿಸಿಕೊಂಡು ಆಗಿಂದಾಗ್ಗೆ ವಿಚಿತ್ರವಾಗಿ ಕೂಗುತ್ತ ಹೆಣ್ಣು ಹಕ್ಕಿಗಳನ್ನು ಆಕರ್ಷಿಸುತ್ತವೆ. ಕತ್ತಿನ ಬೋಳು ಚೀಲಗಳು ಕಿತ್ತಳೆ, ಹಳದಿ ಇತ್ಯಾದಿ ಬಣ್ಣಗಲಿಂದ ಕೂಡಿದ್ದು ಗಾಳಿ ತುಂಬಿ ಉಬ್ಬಿದಾಗ ವರ್ಣರಂಜಿತ ಫಲಗಳಂತೆ ಕಾಣುವುದರಿಂದ ಆಕರ್ಷಣೆ ಹೆಚ್ಚಾಗುತ್ತದೆ. ಪ್ರಣಯಕೇಳಿ ಸಂಭೋಗಕ್ರಿಯೆಯಲ್ಲಿ ಪರ್ಯವಸಾನವಾದ ಮೇಲೆ ಹೆಣ್ಣು ಹಕ್ಕಿಗಳು ಗಂಡಿನ ಅಧೀನ ಪ್ರಾಂತ್ಯದ ವಿವಿಧ ಭಾಗಗಳಲ್ಲಿ ಇಲ್ಲವೆ ಬೇರೆಡೆಯಲ್ಲಿ ನೆಲದಲ್ಲಿ ಗುಂಡಿಮಾಡಿ ಕಡ್ಡಿಗಳನ್ನು ಹರಡಿ ಗೂಡನ್ನು ನಿರ್ಮಿಸಿ ಮೊಟ್ಟೆಯಿಡುತ್ತವೆ. ಮೊಟ್ಟೆಗಳ ಸಂಖ್ಯೆ ಒಂದು ಸೂಲಿಗೆ 5 - 16. ಸುಮಾರು 23 - 29 ದಿವಸಗಳ ಅನಂತರ ಮೊಟ್ಟೆಗಳೊಡೆದು ಮರಿಗಳಾಗುತ್ತವೆ. ಕಾವು ಕೊಟ್ಟು ಮರಿ ಮಾಡುವುದೂ ಮರಿಗಳ ಪಾಲನೆಯೂ ಸಂಪೂರ್ಣವಾಗಿ ಹೆಣ್ಣಿನ ಕೆಲಸ.

ಪ್ರಪಂಚದಲ್ಲಿ ಕಾಣಬರುವ ಗ್ರೌಸುಗಳಲ್ಲಿ ಮುಖ್ಯ ಪ್ರಭೇದಗಳಿವು :

1 ಬೊನಾಸ ಅಂಬೆಲಸ್ (ರಫ್ಡ್ ಗ್ರೌಸ್) : ಉತ್ತರ ಅಮೆರಿಕದ ಉತ್ತರದ ಭಾಗಗಳ ಪರ್ಣಪಾತಿ ಮತ್ತು ಕುರುಚಲು ಕಾಡುಗಳಲ್ಲಿ ವಾಸಿಸುತ್ತದೆ. ಇದರ ದೇಹದ ಬಣ್ಣ ಕಂದು ; ಬಿಳಿ ಮತ್ತು ಕಪ್ಪು ಮಚ್ಚೆಗಳಿಂದ ಕೂಡಿದೆ. ಕೆಲವು ಬಗೆಗಳಲ್ಲಿ ಬಾಲ ಕಂದು ಬಣ್ಣದ್ದೂ ಇನ್ನು ಕೆಲವಲ್ಲಿ ಬೂದು ಬಣ್ಣದ್ದು ಆಗಿದೆ. ಉಳಿದ ಗ್ರೌಸುಗಳಂತಲ್ಲದೆ ಇದು ಏಕಪತ್ನೀಕ.

2 ಟೆಟ್ರಾವೊ ಯುರೋಗ್ಯಾಲಸ್ (ಕೇಪರ್‍ಕೇಲಿ) : ಯೂರೋಪ್ ಹಾಗೂ ಮಧ್ಯ ಸೈಬೀರಿಯಗಳಲ್ಲಿ ಕಾಣಬರುತ್ತದೆ. ಗಂಡು ಹಕ್ಕಿ ಕಪ್ಪು ಬಣ್ಣದ್ದೂ ಹೆಣ್ಣು ಕಂದು ಬಣ್ಣದ್ದೂ ಆಗಿದೆ. 

3 ಲೈರೂರಸ್ ಟೆಟ್ರಿಕ್ಸ್ (ಬ್ಲ್ಯಾಕ್ ಗ್ರೌಸ್) ಇದರ ವಿವರಗಳಿಗೆ (ನೋಡಿ - ಕರಿಹುಂಜ). 

4 ಕ್ಯಾನಕೈಟಿಸ್ ಕೆನಡೆನ್ಸಿಸ್ (ಸ್ಟ್ರೂಸ್ ಗ್ರೌಸ್): ಅಲಾಸ್ಕದಿಂದ ಲ್ಯಾಬ್ರಡಾರ್‍ವರೆಗಿನ ಶಂಕುಪರ್ಣಿಗಳ ಕಾಡುಗಳಲ್ಲಿ ವಾಸಿಸುತ್ತದೆ. 

5 ಸೆಂಟ್ರೊಸರ್ಕಸ್ ಯೂರೊಫೇಸಿಯಾನಸ್ (ಸೇಜ್ ಗ್ರೌಸ್) : ಉತ್ತರ ಅಮೆರಿಕದ ಮಧ್ಯ ಹಾಗೂ ಪಶ್ಚಿಮ ಭಾಗಗಳಲ್ಲಿದೆ. 

6 ಲಗೋಪಸ್ ಜಾತಿಯ ಹಲವಾರು ಪ್ರಭೇದಗಳು (ಟಾರ್ಮಿಗನ್ಸ್) : ಉತ್ತರ ಪರಿಧ್ರುವದಲ್ಲಿ ವಾಸಿಸುತ್ತವೆ. ಇವುಗಳಲ್ಲಿ ವಿಲೊ ಟಾರ್ಮಿಗನ್, ರಾಕ್ ಟಾರ್ಮಿಗನ್‍ಗಳು ಮುಖ್ಯವೆನಿಸಿವೆ. ಇವುಗಳ ವಿವರಗಳಿಗೆ (ನೋಡಿ- ಟಾರ್ಮಿಗನ್).			*
									(ಪರಿಷ್ಕರಣೆ : ಕೆ ಎಸ್ ನವೀನ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ